ಋಣ
ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇನ್ನೊಬ್ಬ ವ್ಯಕ್ತಿ ಅಥವಾ ಇನ್ನೊಂದು ಸಂಸ್ಥೆಗೆ ಕೊಡಬೇಕಾದ ನಿಷ್ಕøಷ್ಟ ಹಣದ ಮೊತ್ತ (ಡೆಟ್). ಇದನ್ನು ಪಾವತಿ ಮಾಡಬೇಕಾದವನು ಋಣಿ; ಪಡೆಯ ಬೇಕಾದವನು ಧನಿ. ಬರಬೇಕಾದ ಬಾಕಿಯೆಂದು ಹೇಳಲಾದ ಹಣವನ್ನು ಖಚಿತವಾಗಿ ಗೊತ್ತುಪಡಿಸದಿದ್ದರೆ ವಾಸ್ತವವಾಗಿ ಅದು ಋಣವಲ್ಲ; ಹಾನಿಪೂರ್ತಿಗಾಗಿ ಮಾಡಿದ ಕೇಳಿಕೆ. ಹಾನಿಪೂರ್ತಿಗಾಗಿ ದಾವೆ ಹಾಕುವ ಹಕ್ಕು ಕೂಡ ಋಣವಲ್ಲ. ಆದರೆ ಯಾವೊಂದು ನ್ಯಾಯಾಲಯದ ಡಿಕ್ರಿ ಅಥವಾ ಆಜ್ಞೆಯನ್ವಯ ಸಂದಾಯವಾಗಬೇಕಾದ ಹಣ ನಿರ್ಣೀತ ಋಣ. ಪಾಲಿಗಾಗಿ ಹಾಕಿದ ದಾವೆಯನ್ನು ಋಣಗಳಿಗಾಗಿ ಹಾಕಿದ ದಾವೆಯೆಂದು ಪರಿಗಣಿಸುವುದಿಲ್ಲ. ಋಣಗಳು ಎರಡು ಬಗೆ: ಕೂಡಲೇ ಸಂದಾಯವಾಗಬೇಕಾದವು ಒಂದು ಬಗೆ. ಸದ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಮುಂದೆ ಸಂಭವಿಸುವ ನಿಶ್ಚಿತವಾದ ಘಟನೆ ಅಥವಾ ದಿನದವರೆಗೆ ಒತ್ತಾಯಪಡಿಸಲು ಸಾಧ್ಯವಿಲ್ಲದಂಥದು ಭವಿಷ್ಯತ್ ಋಣ. ಇದು ಆಗಂತುಕ ಅಥವಾ ಅವಲಂಬಕ (ಕಂಟಿಂಜೆಂಟ್) ಋಣಕ್ಕಿಂತ ಭಿನ್ನವಾದದ್ದು. ಯಾವುದಾದರೂ ಷರತ್ತನ್ನು ಪೂರೈಸುವವರೆಗೂ ಅಥವಾ ನಿಶ್ಚಿತವಲ್ಲದ ಘಟನೆ ಸಂಭವಿಸುವವರೆಗೂ ಅಥವಾ ನಿಶ್ಚಿತವಲ್ಲದ ಘಟನೆ ಸಂಭವಿಸುವವರೆಗೂ ಅಸ್ತಿತ್ವಕ್ಕೇ ಬಾರದ ಋಣವೇ ಆಗಂತುಕ ಅಥವಾ ಅವಲಂಬಕ ಋಣ. ವೈಯಕ್ತಿಕವಾಗಿ ಹಣ ಪಾವತಿ ಮಾಡಬೇಕಾದ ಋಣಿಯ ಮೇಲೆ ಕ್ರಮಕೈಗೊಳ್ಳುವ ಹಕ್ಕನ್ನು ಧನಿ ಹೊಂದಿರುವುದರ ಜೊತೆಗೆ ಋಣದ ವಸೂಲಿಗಾಗಿ ಬೇರೆ ಯಾವುದಾದರೂ ಹಕ್ಕನ್ನು ಅಥವಾ ಸಾಧನವನ್ನು ಋಣಿಯಾದವನ್ನು ಹೊಂದಿದ್ದರೆ ಅದು ಈಡು ಅಥವಾ ಆಧಾರ ಎನಿಸಿಕೊಳ್ಳುತ್ತದೆ. ಈ ಈಡು ಧನಿಗೆ ವಹಿಸಿಕೊಟ್ಟ ಅಥವಾ ಧನಿಯೇ ಪಡೆದುಕೊಂಡ ವ್ಯಕ್ತಿಗತ (ಪರ್ಸನಲ್) ಅಥವಾ ವಸ್ತುಗತ (ರಿಯಲ್) ಸ್ವತ್ತಿನ ಹಕ್ಕಿನ ರೂಪದಲ್ಲಿರಬಹುದು; ಇಲ್ಲವೇ ಋಣಪಾವತಿಯ ಭರವಸೆ (ಜಾಮೀನು) ನೀಡಿರುವ ಮೂರನೆಯ ವ್ಯಕ್ತಿಯೊಬ್ಬನ ವಿರುದ್ಧ ಹಕ್ಕಾಗಿರಬಹುದು. 				(ಎಲ್.ಎಸ್.ಜೆ.)
	
ಋಣದ ವ್ಯಾಖ್ಯೆ ಮತ್ತು ಅದರ ವ್ಯಾಪ್ತಿಯನ್ನು ಕುರಿತು ವಿವೇಚಿಸುವಾಗ ಯಾವೊಂದು ಕಾಯಿದೆಯನ್ವಯ ಋಣಗಳ ಹಕ್ಕು ಬಾಧ್ಯತೆಗಳು ಉದ್ಭವಿಸುತ್ತವೋ ತತ್‍ಸಂಬಂಧದಲ್ಲಿ ಅಂಥ ಕಾಯಿದೆಯಲ್ಲಿ, ಆ ಶಬ್ದಕ್ಕೆ ಕೊಟ್ಟ ನೇರ ಅಥವಾ ಪರ್ಯಾಯ ಸ್ಪಷ್ಟೀಕರಣವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಋಣದ ಬಗ್ಗೆ ಮಾಡಿರುವ ಕಾಯಿದೆಗಳನ್ನು ಪರಾಮರ್ಶಿಸಬೇಕಾಗುತ್ತದೆ. ಹಿಂದೂ ಮತ್ತು ಇಸ್ಲಾಮೀ ನ್ಯಾಯಸೂತ್ರಗಳು, ಸ್ಥಿರ ಸ್ವತ್ತಿನ ಪರಭಾರೆ ಅಥವಾ ಹಸ್ತಾಂತರವನ್ನು ಕುರಿತ ಕಾಯಿದೆ. ಕರಾರುಗಳಿಗೆ ಅನ್ವಯವಾಗುವ ಕಾಯಿದೆ, ಹಣದ ಲೇವಾದೇವಿ ವ್ಯವಹಾರಕ್ಕೆ ಸಂಬಂಧಿಸಿದ ಕಾಯಿದೆ. ಒತ್ತೇದಾರರ ಬಗೆಗಿನ ಕಾಯಿದೆ, ಋಣಗಳ ಸಂಧಾನದ ಕಾಯಿದೆ, ಋಣಗಳ ಅಂಗೀಕಾರಕ್ಕೆ ಸಂಬಂಧಿಸಿದ ನಿಯಮಗಳು, ವಾರಸುದಾರರಿಲ್ಲದ ಸ್ವತ್ತುಗಳಿಗೆ ಅನ್ವಯವಾಗುವ ಕಾಯಿದೆ, ವಿಪರೀತ ಬಡ್ಡಿಗಳನ್ನು ಕುರಿತ ಕಾಯಿದೆ, ಕೃಷಿಕ ಋಣ ವಿಮೋಚನಾ ಸಹಾಯಕ ಕಾಯಿದೆಗಳು, ಸ್ಥಳಾಂತರಿತ ವ್ಯಕ್ತಿಗಳ ಋಣಗಳ ಹೊಂದಾಣಿಕೆಗಳ ಸಂಬಂಧದ ಕಾಯಿದೆಗಳು, ದಿವಾಳಿತನಕ್ಕೆ ಸಂಬಂಧಿಸಿದ ಕಾಯಿದೆಗಳು, ಅವಧಿ ನಿರ್ಣಯ ಕಾಯಿದೆ ವ್ಯವಹಾರ ಪ್ರಕ್ರಿಯಾ ಸಂಹಿತೆ- ಮುಂತಾದವು ಋಣಗಳ ಸ್ವರೂಪವನ್ನು ಅವುಗಳ ವಸೂಲಿಯನ್ನು ನಿಯಂತ್ರಣಗೊಳಿಸುತ್ತವೆ.
ಭಾರತದಲ್ಲಿ :	ಭಾರತ ದೇಶಕ್ಕೆ ಋಣ ಮತ್ತು ಋಣ ವಸೂಲಿಗಳನ್ನು ಕುರಿತ ನ್ಯಾಯಿಕ ಕಲ್ಪನೆಗಳು ಹೊಸವೇನೂ ಅಲ್ಲ. ಅತ್ಯಂತ ಪ್ರಾಚೀನ ಕಾಲದಿಂದಲೂ ಋಣ ಮಾಡುವ ಮತ್ತು ಅದನ್ನು ತೀರಿಸುವ ಅಭ್ಯಾಸ ಜನಸಾಮಾನ್ಯರಲ್ಲಿ ಬಳಕೆಯಲ್ಲಿರುವುದಲ್ಲದೆ, ಇದನ್ನು ಹಿಂದೂ ನ್ಯಾಯ ಪದ್ಧತಿಯಲ್ಲಿ ಅಂಗೀಕರಿಸಲಾಗಿದೆ. ಮನುಸ್ಮøತಿಯ ಕಾಲಕ್ಕೂ ಮುಂಚಿತವಾಗಿಯೇ ಋಣ ವಸೂಲಿಯ ಪ್ರಕ್ರಿಯಾ ನಿಯಮಗಳು ಕೂಡ ಆಚರಣೆಯಲ್ಲಿದ್ದವು. ಋಣವನ್ನು ಸಂದಾಯ ಮಾಡದಿರುವುದು ಕೇವಲ ಒಂದು ವ್ಯಾವಹಾರಿಕ ಒಪ್ಪಂದದ ಉಲ್ಲಂಘನೆಯಷ್ಟೆ ಅಲ್ಲ. ಅದೊಂದು ಪಾಪವೆಂದೂ ಋಣಿಯಾದವನು ಋಣ ಸಂದಾಯ ಮಾಡದಿದ್ದರೆ ಸಾಲ ಕೊಟ್ಟವನ ಮನೆಯಲ್ಲಿ ಗುಲಾಮನಾಗಿಯೋ ಸೇವಕನಾಗಿಯೋ ಅಥವಾ ಇನ್ನಾವುದೋ ರೂಪದಲ್ಲಿ ಋಣ ತೀರಿಸಬೇಕಾಗುತ್ತದೆಯೆಂದೂ ಬೃಹಸ್ಪತಿ ಹೇಳಿದ್ದಾನೆ. ಮನು, ಗೌತಮ, ಬೋಧಾಯನ, ಆಪಸ್ತಂಬ, ಬೃಹಸ್ಪತಿ, ವಸಿಸ್ಠ, ವಿಷ್ಣು, ನಾರದ ಮತ್ತು ಅನೇಕ ಹಿಂದೂ ಧರ್ಮಶಾಸ್ತ್ರಕಾರರು ಋಣ ಮತ್ತು ಋಣವಸೂಲಿಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಈ ಬಗ್ಗೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ಬಂಗಾಳ ಮತ್ತು ಅದರ ನಿಕಟ ಪ್ರದೇಶದಲ್ಲಿ ದಾಯಭಾಗ ನ್ಯಾಯಸೂತ್ರಗಳು ಮತ್ತು ಭಾರತದ ಇತರ ಪ್ರದೇಶಗಳಲ್ಲಿ ಮಿತಾಕ್ಷರ ನ್ಯಾಯಸೂತ್ರಗಳು ಆಚರಣೆಯಲ್ಲಿವೆ. ಈ ಎರಡೂ ರೀತಿಯ ನ್ಯಾಯಸೂತ್ರಗಳು ಬೇರೆ ಬೇರೆಯಾಗಿವೆ. ದಾಯಭಾಗ ನ್ಯಾಯಸೂತ್ರಗಳ ಮೇರೆಗೆ ದಾಯಾದಿ ಅಥವಾ ವಾರಸುದಾರ ಮೃತನ ಸ್ವತ್ತಿನಲ್ಲಿ ಅವಿಭಕ್ತ ಕುಟುಂಬದ ಸ್ವತ್ತಿನಲ್ಲಿ ಹಿತಾಸಕ್ತಿ ಹೊಂದುವುದರಿಂದ ಮೃತನ ಋಣಗಳನ್ನು ಅವು ಅವ್ಯಾವಹಾರಿಕವೇ ವ್ಯವಹಾರಿಕವೇ ಎಂಬ ಪ್ರಶ್ನೆ ಎತ್ತದೆ ತೀರಿಸಬೇಕು. ಆತನ ಋಣಗಳಿಗೆ, ಮಕ್ಕಳೂ ಮೊಮ್ಮಕ್ಕಳೂ ವೈಯಕ್ತಿಕವಾಗಿ ಜವಾಬುದಾರರಲ್ಲ.
	
ಅವಿಭಕ್ತ ಕುಟುಂಬದ ದಾಯಾದ್ಯಕ್ಕೆ ಸೇರಿದ ಆಸ್ತಿ, ಅಂಥ ಕುಟುಂಬದ ಋಣಗಳು ಅಥವಾ ಅವುಗಳ ವಸೂಲಿಗಳ ನಿಯಮಗಳು ಮಿತಾಕ್ಷರ ನ್ಯಾಯ ಸೂತ್ರಗಳ ವೈಶಿಷ್ಟ್ಯವಾಗಿವೆ. ತಂದೆ ಇಲ್ಲದೆ ಅವಿಭಕ್ತ ಕುಟುಂಬದ ಯಜಮಾನ ಅಥವಾ ಅಂಥ ಕುಟುಂಬದ ಕಾರ್ಯನಿರ್ವಹಣೆಯನ್ನು ಹೊತ್ತಿರುವ ಯಾವೊಬ್ಬ ದಾಯಾದಿ ಋಣಗಳಿಗೆ ಕಾರಣನಿರಬಹುದು. ಇತರ ದಾಯಾದಿಗಳೂ ಋಣಗಳಿಗೆ ಕಾರಣರಿರಬಹುದು. ಪೋಷಕ ತನ್ನ ಸಂರಕ್ಷಣೆಯಲ್ಲಿರುವ ಅಪ್ರಾಪ್ತ ವಯಸ್ಕನ ಅವಶ್ಯಕತೆ ಅಥವಾ ಅವನ ಆಸ್ತಿಯ ರಕ್ಷಣೆ ಮತ್ತು ಅಭಿವೃದ್ಧಿಗಳಿಗಾಗಿ ಋಣ ಮಾಡಬಹುದು.
	
ಮೃತ ತಂದೆ ಮಾಡಿದ ಋಣಗಳಿಗೆ ಮಕ್ಕಳು ಎಷ್ಟರ ಮಟ್ಟಿಗೆ ಹೊಣೆ ಎಂಬ ಪ್ರಶ್ನೆ ಉದ್ಭವಿಸಿದಾಗ, ಮೃತನಿಗೆ ಸ್ವಾರ್ಜಿತ ಆಸ್ತಿ ಇತ್ತೆ ಅಥವಾ ಪಿತ್ರಾರ್ಜಿತ ಆಸ್ತಿ ಇತ್ತೆ ಎನ್ನುವುದು ಮುಖ್ಯವಲ್ಲ. ಸಂದಾಯವಾಗಬೇಕಾದ ಋಣಗಳು ವ್ಯಾವಹಾರಿಕ ಋಣಗಳೋ ಅವ್ಯಾವಹಾರಿಕ ಋಣಗಳೋ ಎಂಬುದನ್ನು ವಿವೇಚಿಸುವುದು ಮುಖ್ಯ. ಧಾರ್ಮಿಕ ಅಥವಾ ಯೋಗ್ಯವೆಂದು ಪರಿಗಣಿಸಲುಬಾರದ್ದು ಅವ್ಯಾವಹಾರಿಕ ಎಂದು ಅಪರಾರ್ಕ ಹೇಳಿದ್ದಾನೆ. ಉತ್ತಮ ನೀತಿಗೆ ವಿರೋಧವಾದ ಕಾರಣಗಳಿಗಾಗಿ ಮಾಡಿದ ಋಣವೇ ಅವ್ಯಾವಹಾರಿಕ ಋಣ ಎಂದು ಕೋಲ್‍ಬ್ರುಕ್ ಹೇಳಿರುವ ವ್ಯಾಖ್ಯೆ ಸ್ಮøತಿಗಳಲ್ಲಿ ಆ ಬಗ್ಗೆ ಹೇಳಿರುವ ಲಕ್ಷಣಗಳಿಗೆ ಅತಿ ಹತ್ತಿರವಾಗಿದೆ. ಅಪರಾಧಿಕ ಕಾರಣಗಳಿಂದಾಗಿ ಮಾಡಿದ ಋಣಗಳು, ಅಪರಾಧಿಕ ಸ್ವರೂಪದ ಧನಾಪಹರಣದ ಸಂಬಂಧದ ಋಣಗಳು, ಸುಳ್ಳುದಾವೆಗಳ ಖರ್ಚುವೆಚ್ಚಗಳು, ಕಳವು ಮಾಡಿದ ಹಣದ ಬಗೆಗಿನ ಡಿಕ್ರಿ, ಅಪರಾಧದ ವಿಚಾರಣೆಯಲ್ಲಿ ಹಾಕಿದ ದಂಡಗಳು, ದುರ್ಭಾವನಾಪೂರ್ಣ ಅಭಿಯೋಗ, ವಿಶ್ವಾಸದ್ರೋಹಾಪರಾಧ, ಜೂಜಾಟ, ಕುಡಿತ ಮತ್ತು ಕಾಮುಕ ಕಾರಣಗಳಿಗಾಗಿ ಮಾಡಿದ ಋಣಗಳು ಅವ್ಯಾವಹಾರಿಕ ಋಣಗಳೆಂಬ ಕಾರಣದ ಮೇಲೆ ಅವನ್ನು ಅವಶ್ಯವಾಗಿ ಸಂದಾಯ ಮಾಡಬೇಕಾದ ಕರ್ತವ್ಯದಿಂದ ಮಕ್ಕಳು ಪಾರಾಗಬಹುದು.
	
ಅವಿಭಕ್ತ ಕುಟುಂಬದ ಸ್ವತ್ತಿನಲ್ಲಿನ ಮಕ್ಕಳ ಭಾಗಕ್ಕೆ ಅಥವಾ ಅವರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಅವರಿಗೆ ತಂದೆಯ ಋಣದ ಹೊರೆ ಇದ್ದೇ ಇರುತ್ತದೆ. ನೈತಿಕವಾಗಿ ಇದು ಕರ್ತವ್ಯ. ಆದರೆ ಇಂಥ ಹೊರೆಯನ್ನು ತಪ್ಪಿಸಬೇಕಾದಲ್ಲಿ ಈ ಋಣ ಅನೈತಿಕ ಅಥವಾ ವಿಧಿಬಾಹಿರ. ಎಂದರೆ ಅವ್ಯಾವಹಾರಿಕ ಋಣವೆಂಬುದಾಗಿ ರುಜುವಾತು ಮಾಡಬೇಕಾದ್ದು ಮಕ್ಕಳ ಹೊಣೆಯಾಗಿರುತ್ತದೆ. ಅನೈತಿಕ ಅಥವಾ ವಿಧಿಬಾಹಿರ ಉದ್ದೇಶಗಳಿಗೂ ಋಣಗಳಿಗೂ ಇರುವ ನೇರ ಅಥವಾ ಪರೋಕ್ಷ ಸಂಬಂಧವನ್ನು ಸ್ಥಿರಪಡಿಸಬೇಕು. ತಂದೆ ಅಪ್ರಾಪ್ತವಯಸ್ಕನಾಗಿದ್ದಾಗ ಬರೆದು ಕೊಟ್ಟ ವಾಗ್ದಾನ ಪತ್ರಕ್ಕೆ ಮಕ್ಕಳು ಹೊಣೆಯಲ್ಲ; ಆದರೆ ಪ್ರಾಪ್ತವಯಸ್ಸಿಗೆ ಬಂದ ಮೇಲೆ ಅದನ್ನು ಅಂಗೀಕರಿಸಲಾಗಿದ್ದರೆ ಮಕ್ಕಳು ಹೊಣೆಯಾಗುತ್ತಾರೆ.
	
ಋಣಗಳ ವಸೂಲಿಗೆ ಅವಧಿ ನಿರ್ಣಯ ಕಾಯಿದೆಯ (ಲಿಮಿಟೇಷನ್ ಆಕ್ಟ್) ಮೇರೆಗೆ ಅವಧಿಯನ್ನು ನಿಗದಿಗೊಳಿಸಲಾಗಿದೆ. ಮಕ್ಕಳ ಕರ್ತವ್ಯ ಪರಿಪಾಲನೆಯ ದೃಷ್ಟಿಯಿಂದ ಸಂದಾಯ ಮಾಡಬೇಕಾದ ಋಣಗಳನ್ನು ಬಿಟ್ಟು ಇತರ ಋಣಗಳ ಸಂಬಂಧದಲ್ಲಿ ಹಿಂದೂ ನ್ಯಾಯಶಾಸ್ತ್ರ ಕೆಲವು ಪರಿಮಿತಿಗಳನ್ನು ಹಾಕಿತ್ತು. ವ್ಯಾವಹಾರಿಕ ಮತ್ತು ಅವಿಭಕ್ತ ಕುಟುಂಬದ ಅವಶ್ಯಕತೆಗಳಿಗಾಗಿ ಪೂರ್ವಜರು ಋಣ ಮಾಡಿದ್ದರೆ ಮಕ್ಕಳು ಮೊಮ್ಮಕ್ಕಳು ತಮ್ಮ ಪಿತ್ರಾರ್ಜಿತ ಸ್ವತ್ತಿನಲ್ಲಿನ ತಮ್ಮ ಹಿತಾಸಕ್ತಿಗಳ ಮಟ್ಟಿಗೆ ಹೊಣೆಯಾಗಿರುತ್ತಾರೆ. ಈ ನಿಯಮ ವಾರಸುದಾರರಿಗೂ ಅನ್ವಯವಾಗುತ್ತದೆ. ತಂದೆ ತೀರಿದ ಮೇಲೆ ಆತನ ಋಣಗಳ ಸಂದಾಯಕ್ಕಾಗಿ ಆತನ ಮಕ್ಕಳ ಹಿತಾಸಕ್ತಿಗಳನ್ನು ಅವರ ಪಿತಾಮಹ ಪರಭಾರೆ ಮಾಡಲಾರ. ಆದರೆ ತಂದೆ ತನ್ನ ಜೀವಿತ ಕಾಲದಲ್ಲಿ ತನ್ನ ಸ್ವಾರ್ಜಿತ ಮತ್ತು ಪಿತ್ರಾರ್ಜಿತ ಸ್ವತ್ತನ್ನು ತನ್ನ ಮತ್ತು ಪೂರ್ವಜರ ಋಣಗಳ ಸಂದಾಯಕ್ಕಾಗಿ ಈಡು ಮಾಡಬಹುದು. ಅಥವಾ ಮಾರಬಹುದು. ಆದರೆ ಮಕ್ಕಳು ವಿಭಾಗಮಾಡಿಕೊಂಡ ಅನಂತರ ತಂದೆ ಋಣ ಮಾಡಿದರೆ, ಋಣಕ್ಕೆ ಅವರು ಹೊಣೆಯಲ್ಲ.
	
ಅವಿಭಕ್ತ ಕುಟುಂಬದ ಕಾರ್ಯನಿರ್ವಹಣೆಯ ಜವಾಬ್ದಾರಿ ಇಲ್ಲದ ದಾಯಾದಿ ತನ್ನ ಸ್ವಂತಕ್ಕಾಗಿ ಮಾಡಿದ ಋಣಗಳನ್ನು ಅವನ ಪಾಲಿನ ಸ್ವತ್ತು ಅಥವಾ ಹಿತಾಸಕ್ತಿಗಳಿಂದ ಸಾಲಿಗರು ವಸೂಲಿಮಾಡಿಕೊಳ್ಳಬಹುದು. ಋಣಿಯ ಜೀವಿತ ಕಾಲದಲ್ಲಿ ಒಂದು ವೇಳೆ ಆತ ಸ್ವತ್ತನ್ನು ಈಡುಮಾಡಿ ಸಾಲತೆಗೆದುಕೊಂಡಿದ್ದರೆ, ದಾಯಭಾಗ ನ್ಯಾಯಸೂತ್ರಗಳು ಅನ್ವಯವಾಗುವ ಪ್ರದೇಶಗಳಲ್ಲಿ ಇಂಥ ಸ್ವತ್ತಿನ ಮಾರಾಟಕ್ಕೆ ಡಿಕ್ರಿ ಪಡೆಯಬಹುದು. ಕುಟುಂಬದ ಅವಶ್ಯಕತೆ ಅಥವಾ ಅದರ ಆಸ್ತಿಯ ರಕ್ಷಣೆ ಮತ್ತು ಪುರೋಭಿವೃದ್ಧಿಗೆ ಋಣ ಮಾಡಿದ್ದರೆ, ಇಲ್ಲವೆ ಸಾಲಕೊಟ್ಟವನು ಆ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿ ಕೊಟ್ಟಿದ್ದರೆ ಅಂಥ ಕುಟುಂಬದ ಎಲ್ಲ ಸ್ವತ್ತೂ ಋಣಪಾವತಿಗೆ ಹೊಣೆಯಾಗಿರುತ್ತದೆ. ದಾಯಾದಿಗಳು ಅಂಥ ಋಣಕ್ಕೆ ಸಮ್ಮತಿ ಕೊಟ್ಟಿದ್ದರೆ ಅವರು ಸ್ವತ್ತಿನಲ್ಲಿನ ತಮ್ಮ ಹಿತಾಸಕ್ತಿಗಳ ಮಟ್ಟಿಗೆ ಹೊಣೆಯಾಗಿರುತ್ತಾರೆ. ಆಮೇಲೆ ಸ್ವತ್ತು ವಿಭಾಗ ಮಾಡಿಕೊಂಡರೂ ಸಾಲ ಕೊಟ್ಟವನು ಎಲ್ಲರ ಮೇಲೆ ದಾವೆ ಹಾಕಿ ಋಣಗಳನ್ನು ವಸೂಲಿ ಮಾಡಿಕೊಳ್ಳಬಹುದು. ಯಜಮಾನ ಅಥವಾ ಕುಟುಂಬದ ಕಾರ್ಯನಿರ್ವಹಣೆಯ ಜವಾಬ್ದಾರಿ ಹೊತ್ತ ದಾಯಾದಿ ಮಾಡಿದ ಋಣಗಳು ಕೇವಲ ಕುಟುಂಬದ ಉದ್ದೇಶಗಳಿಗಾಗಿ ಮಾಡಿದ ಋಣಗಳೆಂದು ಅಧ್ಯಾಹೃತವಲ್ಲ. ಕುಟುಂಬದ ಕಾರ್ಯನಿರ್ವಹಣೆಯ ಜವಾಬ್ದಾರಿ ಇಲ್ಲದ ದಾಯಾದಿಗಳ ಋಣಗಳಿಗೆ ಇತರ ದಾಯಾದಿಗಳೂ ಕುಟುಂಬದ ಸ್ವತ್ತಿನಲ್ಲಿನ ಅವರ ಹಿತಾಸಕ್ತಿಗಳೂ ಹೊಣೆಯಾಗಿರುವುದಿಲ್ಲ.
	
ಧನಿಯಾದವನು ಋಣಿಯ ವಿರುದ್ಧವಾಗಿಯೋ ಅವನ ಮಕ್ಕಳ ಅಥವಾ ವಾರಸುದಾರರ ವಿರುದ್ಧವಾಗಿಯೋ ದಾವೆ ಹಾಕಬಹುದು. ಎಲ್ಲ ರೀತಿಯ ಋಣಗಳ ವಸೂಲಿಗಳ ಬಗ್ಗೆ ಅವಧಿ ನಿರ್ಣಯ ಕಾಯಿದೆಯಲ್ಲಿ ಅವಧಿಗಳನ್ನು ನಿಗದಿಗೊಳಿಸಲಾಗಿದೆ. ಋಣಕ್ಕೆ ಈಡು ಅಥವಾ ಆಧಾರದ ಭದ್ರತೆ ಇದ್ದರೆ, ಅಂಥ ಸಂದರ್ಭಗಳಿಗೂ ಅವಧಿಗಳನ್ನು ನಿಗದಿಗೊಳಿಸಲಾಗಿದೆ. ಈ ಬಗ್ಗೆ ದಾವೆ ಹಾಕುವ ಪ್ರಕ್ರಿಯೆಯನ್ನು ಕುರಿತು ವ್ಯವಹಾರ ಪ್ರಕ್ರಿಯಾ ಸಂಹಿತೆಯಲ್ಲಿ ಹೇಳಲಾಗಿದೆ. ಋಣಗಳ ವಸೂಲಿಗಾಗಿ ಋಣಿಯ ವಿರುದ್ಧ ಡಿಕ್ರಿ ಪಡೆದಿದ್ದಾಗ ಆತ ತೀರಿಹೋದರೆ ವ್ಯವಹಾರ ಪ್ರಕ್ರಿಯಾ ಸಂಹಿತೆಯ 53ನೆಯ ಪ್ರಕರಣದನ್ವಯ ಆತನ ಮಕ್ಕಳ ಅಥವಾ ವಾರಸುದಾರರ ವಿರುದ್ಧ ಕ್ರಮ ಜರುಗಿಸಬಹುದು. ಋಣಗಳ ಸಂದಾಯದ ಸಂಬಂಧದಲ್ಲಿ ತಂದೆಯ ಹೆಸರಿಗೆ ತಂದ ಡಿಕ್ರಿಯಲ್ಲಿ ಮಕ್ಕಳ ಹಿತಾಸಕ್ತಿಗಳನ್ನು ಜಫ್ತಿ ಮಾಡಿದ್ದರೆ ತಂದೆಯ ಋಣ ಅವ್ಯಾವಹಾರಿಕವೆಂದು ಕಾರಣ ಕೊಟ್ಟು ಮಕ್ಕಳು ವ್ಯವಹಾರ ಪ್ರಕ್ರಿಯಾ ಸಂಹಿತೆಯ (ಸಿವಿಲ್ ಪ್ರೊಸೀಜರ್ ಕೋಡ್) 21ನೆಯ ಆದೇಶದ 38ನೆಯ ನಿಯಮದನ್ವಯ ತಮ್ಮ ಹಿತಾಸಕ್ತಿಗಳ ಮಾರಾಟವನ್ನು ವಿರೋಧಿಸಬಹುದು. ಈ ವಿರೋಧವನ್ನು ನ್ಯಾಯಾಲಯ ಒಪ್ಪಿದರೆ ಸಾಲ ಕೊಟ್ಟವನು ಒಂದು ವರ್ಷದೊಳಗೆ ಅಂಥ ಆಜ್ಞೆಯನ್ನು ವಿರೋಧಿಸಿ ಹೊಸ ದಾವೆ ಹಾಕಬೇಕು. ಮಕ್ಕಳ ವಿರೋಧವನ್ನು ತಳ್ಳಿಹಾಕಿದರೆ, ಅಂಥ ಅವಧಿಯೊಳಗಾಗಿ ಅದೇ ಸಂಹಿತೆಯ 21ನೆಯ ಆದೇಶದ 63ನೆಯ ನಿಯಮದನ್ವಯ ದಾವೆ ಹಾಕಬೇಕು. ಧನಿಯಾದವನು ಪಡೆದ ಡಿಕ್ರಿಯ ಸಂಬಂಧದ ಋಣ ತಮ್ಮ ತಂದೆ ಮಾಡಿದ ಋಣವಲ್ಲವೆಂಬುದು ಮಕ್ಕಳ ಧೋರಣೆಯಾದರೆ ಆ ಬಗ್ಗೆ ಹೊಸ ದಾವೆ ಹಾಕಬೇಕು. ಈಡು ಅಥವಾ ಆಧಾರದ ಮೂಲಕ ಋಣಗಳ ಹಣಕ್ಕೆ ಭದ್ರತೆ ಇದ್ದು ಆ ಸಂಬಂಧದಲ್ಲಿ ಧನಿ ಡಿಕ್ರಿ ಪಡೆದಿದ್ದರೆ ತತ್ಸಂಬಂಧದ ಋಣ ಅನೈತಿಕ ಅಥವಾ ವಿಧಿ ಬಾಹಿರವಾಗಿದ್ದಲ್ಲಿ ಆ ವಿಷಯವನ್ನು ಮಾರಾಟದ ಘೋಷಣೆಯ ಕಾಲಕ್ಕೆ ಅಥವಾ ಅದಕ್ಕೂ ಮುಂಚೆ ಕೊಳ್ಳುವವರ ಗಮನಕ್ಕೆ ತಂದು ಹೊಸ ದಾವೆ ಹಾಕಬೇಕು.
ಇಸ್ಲಾಮೀ ನ್ಯಾಯದಲ್ಲಿ : ಋಣಗಳ ಬಗ್ಗೆ ಇಸ್ಲಾಮೀ ನ್ಯಾಯಸೂತ್ರಗಳು ಹಿಂದೂ ನ್ಯಾಯ ಸೂತ್ರಗಳಿಂದ ಸ್ವಲ್ಪ ಭಿನ್ನವಾಗಿವೆ. ಪತಿ ಪತ್ನಿಗೆ ಕೊಡಬೇಕಾಗುವ ಮಹರ್ ಹಣ ಋಣವಾಗಿ ಪರಿಣಮಿಸಬಹುದು. ಮಹರ್ ಋಣ ಇಸ್ಲಾಮೀ ನ್ಯಾಯದನ್ವಯದ ಒಂದು ವಿಶಿಷ್ಟ ಋಣ. ಅದನ್ನು ಪತಿಯ ಜೀವಿತಕಾಲದಲ್ಲಿ ಅಥವಾ ಆತನ ಮರಣಾನಂತರ ಪಡೆಯಬಹುದು. ಮೃತನ ಸ್ವತ್ತನ್ನು ಪಾಲಿಗೆ ಹಾಕುವುದಕ್ಕೆ ಮುಂಚೆ ಮಹರ್ ಋಣವನ್ನು ಸಂದಾಯ ಮಾಡಬೇಕೆಂದು ಆತನ ಪತ್ನಿ ಹೇಳಬಹುದು ಮತ್ತು ಪಡೆಯಬಹುದು. ಅಂಥ ಹಣವನ್ನು ಆಕೆ ಸ್ವತಃ ಪಡೆಯಬಹುದು ಅಥವಾ ಹಾಗೆ ಪಡೆಯುವ ಹಕ್ಕನ್ನು ಬೇರೊಬ್ಬರಿಗೆ ವಹಿಸಿಕೊಡಬಹುದು.
	
ಬಡ್ಡಿ ಸ್ವೀಕರಿಸುವುದನ್ನು ನಿಷೇಧಿಸುವ ಇಸ್ಲಾಮೀ ನ್ಯಾಯಸೂತ್ರ ಈಗ ಧಾರ್ಮಿಕ ನೀತಿಯಾಗಿ ಉಳಿದಿದೆ. ಅಪ್ರಾಪ್ತ ವಯಸ್ಸಿನವರು ಕೂಡ ಬಡ್ಡಿಗಳ ಕಾಯಿದೆ ಪ್ರಕಾರ ಋಣಗಳ ಜೊತೆಗೆ ಯೋಗ್ಯವಾದ ಬಡ್ಡಿ ಕೊಡಬೇಕು. ಪೋಷಕ ತನ್ನ ಸಂರಕ್ಷಣೆಯಲ್ಲಿರುವ ಅಪ್ರಾಪ್ತ ವಯಸ್ಕನ ಪರವಾಗಿ ಋಣಗಳನ್ನು ಮಾಡಬಹುದು. ಋಣಗಳ ಅವಧಿ ಮುಗಿದಿದ್ದರೆ ಆತ ಅದನ್ನು ಹೆಚ್ಚಿಸಲಾರ.
	
ಮೃತನ ಸ್ವತ್ತು ಋಣಗಳ ಸಂದಾಯಕ್ಕೂ ವಾರಸುದಾರರ ಪಾಲಿಗೂ ಮತ್ತು ರಿಕ್ತಗಳಿಗೂ ವಿತರಣೆಯಾಗುತ್ತದೆ. ಆದರೆ ಋಣಗಳ ಸಂದಾಯಕ್ಕೆ ಆದ್ಯತೆಯುಂಟು. ಋಣಗಳು ಸಂದಾಯವಾಗಿಲ್ಲವೆಂಬ ಕಾರಣಕ್ಕಾಗಿ ಮೃತನ ಸ್ವತ್ತಿಗೆ ವಿಭಾಗವನ್ನು ಮುಂದೂಡಬೇಕಿಲ್ಲ. ಏಕೆಂದರೆ ಇಸ್ಲಾಮೀ ನ್ಯಾಯದನ್ವಯ ಮೃತನ ಸ್ವತ್ತು ಆತನ ವಾರಸುದಾರರಿಗೆ ಕೂಡಲೇ ಪ್ರಾಪ್ತವಾಗುತ್ತದೆ. ಮತ್ತು ಹಾಗೆ ಪ್ರಾಪ್ತವಾಗುವ ಸ್ವತ್ತಿನಲ್ಲಿನ ಹಿತಾಸಕ್ತಿಗಳ ಪ್ರಮಾಣದಲ್ಲಿ ಆತನ ಋಣಗಳಿಗೆ ಅವು ಹೊಣೆಯಾಗಿರುತ್ತದೆ. ವಾರಸುದಾರರು ಆತನ ಋಣಗಳಿಗೆ ವೈಯಕ್ತಿಕವಾಗಿ ಹೊಣೆಯಲ್ಲ. ಧನಿಯಾದವನು ಎಲ್ಲ ವಾರಸುದಾರರ ಮೇಲೆ ತನಗೆ ಬರಬೇಕಾದ ಋಣಗಳ ಸಂದಾಯಕ್ಕೆ ದಾವೆ ಹಾಕಿದಾಗ ಮೃತನ ಸ್ವತ್ತು ಇನ್ನೂ ವಿಭಾಗವಾಗದೆ ಇದ್ದರೆ ಅಂಥ ಒಟ್ಟು ಸ್ವತ್ತಿನ ಮೇಲೆ ಡಿಕ್ರಿ ಪಡೆಯಬಹುದು. ಅಂಥ ಸಂದರ್ಭದಲ್ಲಿ ವಾರಸುದಾರರು ತಮ್ಮ ತಮ್ಮ ಪಾಲಿಗೆ ಬರಬೇಕಾದ ಪಾಲು ಮತ್ತು ಋಣ ಇವುಗಳ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಡಿಕ್ರಿ ಪಡೆಯುವ ಮುನ್ನ ಸ್ವತ್ತು ವಿಭಾಗವಾಗಿದ್ದರೆ ಎಲ್ಲ ವಾರಸುದಾರರ ವಿರುದ್ಧ ಅವರವರ ಹೊಣೆಯನ್ನು ಅರಿತು ಡಿಕ್ರಿ ಪಡೆಯಬೇಕು. ಒಬ್ಬ ವಾರಸುದಾರ ಇನ್ನೊಬ್ಬ ವಾರಸುದಾರನ ಪಾಲಿಗೆ ಬರುವ ಸ್ವತ್ತನ್ನು ಅಥವಾ ಹಿತಾಸಕ್ತಿಗಳನ್ನು ಮೃತನ ಋಣಗಳ ಸಂದಾಯಕ್ಕಾಗಿ ಕೂಡ ಪರಭಾರೆ ಮಾಡಲು ಬರುವುದಿಲ್ಲ. ಮೃತನ ಸ್ವತ್ತಿನ ಸಂಬಂಧದಲ್ಲಿ ಆತನ ಋಣಗಳ ಸಂದಾಯಕ್ಕೆ ಆತನ ವಾರಸುದಾರರ ಋಣಗಳ ಸಂದಾಯಕ್ಕಿಂತ ಹೆಚ್ಚು ಮಹತ್ತ್ವ ಕೊಡಲಾಗುತ್ತದೆ.
	
ಮರಣ ಶಯ್ಯೆಯಲ್ಲಿದ್ದಾಗ ಕೂಡ ಮುಸ್ಲಿಮರು ಋಣಗಳನ್ನು ಅಂಗೀಕರಿಸಬಹುದು. ಅಂಥ ಋಣಗಳ ಸಂಬಂಧದಲ್ಲಿ ಇತರ ಸಾಕ್ಷ್ಯವಿಲ್ಲದಿದ್ದರೆ ಉಳಿದ ಹಣಗಳನ್ನು ತೀರಿಸಿದ ಮೇಲೆ ಅವುಗಳನ್ನು ತೀರಿಸಬೇಕು. ಹಾಗೆ ಅಂಗೀಕರಿಸಿದ ಋಣಗಳು ವಾರಸುದಾರನೊಬ್ಬನ ಪರವಾಗಿ ಇದ್ದರೆ ಇತರ ವಾರಸುದಾರರು ಒಪ್ಪದಿದ್ದಲ್ಲಿ ಅಂಥ ಋಣಗಳ ಸಂದಾಯದ ಪ್ರಶ್ನೆ ಉದ್ಭವಿಸುವುದಿಲ್ಲ. ಮೃತನ ಸ್ವತ್ತಿನ ವ್ಯವಹಾರವನ್ನು ನೋಡಿಕೊಳ್ಳಲು ವ್ಯವಸ್ಥಾಪಕನನ್ನು ನೇಮಕ ಮಾಡದಿದ್ದರೆ ಅಂಥ ಸ್ವತ್ತಿನ ಹೊಣೆಯಾಗಿರುವ ಋಣಗಳ ಸಂದಾಯವನ್ನೊಳಗೊಂಡು ಅದರ ವ್ಯವಹಾರವನ್ನು 1925ರ ಭಾರತೀಯ ಉತ್ತರಾಧಿಕಾರದ ಕಾಯಿದೆಯ ಮೇರೆಗೆ ನಡೆಸಲಾಗುತ್ತದೆ.
ದಿವಾಳಿತನ, ಋಣವಸೂಲಿ :	ದಿವಾಳಿತನಕ್ಕೆ ಸಂಬಂಧಿಸಿದ ಕಾಯಿದೆಗಳನ್ವಯ ಋಣಿ ದಿವಾಳಿ ತೆಗೆಯಬಹುದು. ಧನಿ ಅಂಥವನಿಗೆ ಈಡು ಅಥವಾ ಆಧಾರದ ಮೇಲೆ ಸಾಲ ಕೊಟ್ಟಿದ್ದರೆ ಆ ಸ್ವತ್ತನ್ನು ಒಪ್ಪಿಸಿ, ದಿವಾಳಿ ಕಾಯಿದೆಗಳ ಮೇರೆಗೆ ಬರಬಹುದಾದ ಪ್ರಮಾಣದಲ್ಲಿ ಋಣ ಸಂದಾಯವನ್ನು ಸ್ವೀಕರಿಸಬೇಕು; ಇಲ್ಲವೇ ಬೇರೆ ಕ್ರಮ ಜರುಗಿಸಿ ಈಡಾದ ಅಥವಾ ಆಧಾರದ ಸ್ವತ್ತಿನ ಮಾರಾಟದಿಂದ ಹಣ ಪಡೆಯಬಹುದು. ಯಾವುದೇ ರೀತಿಯ ಈಡು ಅಥವಾ ಆಧಾರ ಇಲ್ಲದ ಋಣಗಳ ಸಂಬಂಧದಲ್ಲಿ ನಿಗದಿಗೊಳಿಸಿದ ಅವಧಿಯೊಳಗೆ ಧನಿಗಳು ಅದನ್ನು ಸ್ವೀಕರಿಸದಿದ್ದರೆ, ಆ ಋಣಗಳಿಗಾಗಿ ಆಮೇಲೆ ಬೇರೆ ದಾವೆ ಹಾಕಲು ಬರುವುದಿಲ್ಲ. ಈ ಕಾಯಿದೆಗಳಲ್ಲಿ ಋಣಗಳ ಸಂದಾಯದ ತಾರತಮ್ಯವನ್ನೂ ಹೇಳಲಾಗಿದೆ. ದಿವಾಳಿತನದ ಸಂಬಂಧವಾಗಿ ಕಾರ್ಯವಾಹಿಯ ಖರ್ಚು ವೆಚ್ಚಗಳಿಗಾಗಿ ಹಣ ಉಳಿಸಿಕೊಂಡು, ಸರ್ಕಾರಕ್ಕೆ ಮತ್ತು ಸ್ಥಳೀಯ ಪ್ರಾಧಿಕಾರಕ್ಕೆ ಕೊಡಬೇಕಾದ ಋಣವನ್ನು ಸಂದಾಯ ಮಾಡಲಾಗುವುದು. ದಿವಾಳಿ ತೆಗೆಯುವ ಪೂರ್ವದಲ್ಲಿನ ನಾಲ್ಕು ತಿಂಗಳಲ್ಲಿ ಸಲ್ಲಿಸಿದ ಸೇವೆಯ ನಿಮಿತ್ತ ದಿವಾಳಿ ತೆಗೆದವನ ನೌಕರರಿಗೆ ಒಂದು ಗೊತ್ತಾದ ಮಿತಿಯನ್ನು ಮೀರದ ವೇತನ ಅಥವಾ ಕೂಲಿಗಳನ್ನು ಕೊಡಲಾಗುವುದು. ಉಳಿದ ಹಣದಲ್ಲಿ ಇತರ ಋಣಗಳನ್ನು ಅನುಪಾತ ಕ್ರಮದಲ್ಲಿ ಸಂದಾಯ ಮಾಡಲಾಗುವುದು. ಪಾಲುದಾರಿಕೆಗೆ ಸಂಬಂಧಿಸಿದ ಋಣಗಳ ಸಂದಾಯವನ್ನು ದಿವಾಳಿಗೆ ಸಂಬಂಧಿಸಿದ ಮಟ್ಟಿಗೆ ಈ ಕಾಯಿದೆಗಳಲ್ಲಿ ಹೇಳಲಾಗಿದೆ. 
	
ಋಣಗಳ ವಸೂಲಿಯ ವಿಷಯದಲ್ಲಿ ಋಣಿಯೂ ಧನಿಯೂ ತನ್ನ ತನ್ನ ಹಕ್ಕುಬಾಧ್ಯತೆಗಳನ್ನು ದೃಢೀಕರಿಸಲು, ವಸೂಲಿ ತಡೆಯಲು ಅಥವಾ ವಸೂಲಿ ಮಾಡಿಕೊಳ್ಳಲು ಅನುಸರಿಸಬೇಕಾಗುವ ಪ್ರಕ್ರಿಯಾ ನಿಯಮಗಳು ಭಾರತದ ಸರ್ವ ನಾಗರಿಕರಿಗೂ ಒಂದೇ ಬಗೆಯಾಗಿವೆ. ಇವುಗಳನ್ನು ವ್ಯವಹಾರ ಪ್ರಕ್ರಿಯಾ ಸಂಹಿತೆಯಲ್ಲಿ ಹೇಳಲಾಗಿದೆ. 	 			
(ಎಲ್.ಎಸ್.ಜೆ.)
ಪರಿಷ್ಕರಣೆ : ಜಿ ಎಸ್ ಶ್ರೀನಾಥ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ